ಚೌಡಪ್ಪನಾಯಕ
ಆ.1498-1514. ಚೌಡಗೌಡ, ಚೌಡಪ್ಪಗೌಡ ಎಂದೂ ಕರೆಯಲ್ಪಡುವ ಈತ ಕೆಳದಿಯ ನಾಯಕಿ ಮನೆತನದ ಸ್ಥಾಪಕ. ಬಸವರಾಜ ಕವಿಯ ಶಿವತತ್ತ್ವ ರತ್ನಾಕರ ಮತ್ತು ಲಿಂಗಣ್ಣ ಕವಿಯ ಕೆಳದಿನೃಪವಿಜಯ ಎಂಬ ಗ್ರಂಥಗಳಲ್ಲಿ ಕೆಳದಿ ರಾಜ್ಯಸ್ಥಾಪನೆಗೆ ಸಂಬಂಧಿಸಿದ ವರ್ಣನೆಗಳಿವೆ. ಚೌಡಪ್ಪಗೌಡನೂ ಅವನ ಸಹೋದರನಾದ ಭದ್ರಗೌಡನೂ ಕೆಳದಿಯಿಂದ ಅರ್ಧ ಮೈ. ದೂರದ ಪಳ್ಳಿಬಯಲು ಗ್ರಾಮದ ನಿವಾಸಿಯಾಗಿದ್ದ ಬಸವಪ್ಪಗೌಡನ ಮಕ್ಕಳು. ಅವರು ವ್ಯವಸಾಯ ಮಾಡಿಕೊಂಡು ನೆಮ್ಮದಿಯಿಂದ ಬಾಳುತ್ತಿದ್ದರು. ಸೂಕ್ತ ಸಮಯ ಒದಗಿಬಂದು ಚೌಡಪ್ಪಗೌಡ ಗ್ರಾಮಾಧಿಪತಿಯಾಗಿ, ಕೊನೆಗೆ ಕೆಳದಿ ಸಂಸ್ಥಾನವನ್ನಾಳುವ ನಾಯಕ ಮನೆತನವನ್ನು ಸ್ಥಾಪಿಸಿದ.

	ಚೌಡಪ್ಪಗೌಡ ಕೆಳದಿಯ ನಾಯಕನಾದ ಬಗ್ಗೆ ಅನೇಕ ಕತೆಗಳಿವೆ. ಒಂದು ದಿನ ಚೌಡಪ್ಪಗೌಡ ತನ್ನ ಜಮೀನಿನಲ್ಲಿ ಕೆಲಸ ಮಾಡಿದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾಗ ಇವನ ಮೇಲೆ ಬಿಸಿಲು ಬೀಳದಂತೆ ನೆರಳು ಮಾಡಲು ಸರ್ಪವೊಂದು ಹೆಡೆಯಾಡಿಸುತ್ತಿತ್ತೆಂದೂ ಇದನ್ನು ನೋಡಿದ ವೆಂಕಟಾದ್ರಿ ಜೋಯಿಸನೆಂಬವನು ಚೌಡಪ್ಪನಿಗೆ ಹೊನ್ನಿನ ರಾಶಿಯೂ ರಾಜ್ಯವೂ ಪ್ರಾಪ್ತಿಯಾಗುವುದೆಂದು ಭವಿಷ್ಯ ನುಡಿದನೆಂದೂ ಅವನ ನಿರ್ದೇಶನದಂತೆ ಇವನು ನಡೆದುಕೊಂಡನೆಂದೂ ಹೇಳಲಾಗಿದೆ. ಚೌಡಪ್ಪಗೌಡ ನೆಲವನ್ನು ಹದಮಾಡುತ್ತಿದ್ದಾಗ ಅವನ ಸೇವಕರಿಗೆ ಒಂದು ಅಪೂರ್ವ ಖಡ್ಗ ಸಿಕ್ಕಿತೆಂದೂ ಅವನು ಅವರಿಂದ ಖಡ್ಗವನ್ನೂ ಸ್ವೀಕರಿಸಿ ಅದಕ್ಕೆ ನಾಗರಮುರಿ ಎಂದು ಹೆಸರು ಕೊಟ್ಟನೆಂದು ಆ ಖಡ್ಗ ಮುಂದೆ ಚೌಡಪ್ಪ ತನ್ನ ಶತ್ರುಗಳನ್ನು ನಿಗ್ರಹಿಸಲು ಸಹಕಾರಿಯಾಯಿತೆಂದೂ ಕತೆ ಇದೆ. ಚೌಡಪ್ಪನ ಆಕಳೊಂದು ಹುತ್ತವೊಂದರ ಬಳಿಗೆ ಹೋಗಿ ಅದರ ಮೇಲೆ ಹಾಲನ್ನು ಸುರಿಸುತ್ತಿತ್ತು. ಆಶ್ಚರ್ಯದಿಂದ ಚೌಡಪ್ಪ ಹುತ್ತವನ್ನು ಅಗೆಯಲಾಗಿ ಅಲ್ಲಿ ಒಂದು ಲಿಂಗ ದೊರೆಯಿತು. ಅದು ರಾಮೇಶ್ವರ ಲಿಂಗವೆಂದೂ ಆ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಿಸಬೇಕೆಂದೂ ತತ್‍ಕ್ಷಣವೇ ಅವನಿಗೆ ರಾಜ್ಯ ಪ್ರಾಪ್ತಿಯಾಗುವುದೆಂದೂ ಅಂದಿನ ರಾತ್ರಿ ಅವನಿಗೆ ಕನಸಿನಲ್ಲಿ ವಿಪ್ರನೊಬ್ಬ ಹೇಳಿದ. ಚೌಡಪ್ಪ ಅಲ್ಲಿ ದೇವಾಲಯವನ್ನು ಕಟ್ಟಿಸಿ ಅದನ್ನು ತನ್ನ ಮನೆದೇವತೆಯೆಂದು ಪರಿಗಣಿಸಿ ನಿಷ್ಠೆಯಿಂದ ಪೂಜಿಸುತ್ತಿದ್ದ. ಇದು ಮತ್ತೊಂದು ಕತೆ. ತನ್ನ ಜಮೀನಿನಲ್ಲಿ ದೊರೆತ ನಿಧಿಯನ್ನು ಉಪಯೋಗಿಸಿಕೊಂಡು ಚೌಡಪ್ಪಗೌಡ ಸೈನ್ಯವನ್ನು ಕಟ್ಟಿ ಸುತ್ತಮುತ್ತಿನ ಪಾಳೆಯಗಾರರನ್ನು ಸೋಲಿಸಿ ರಾಜ್ಯವನ್ನು ಸ್ಥಾಪಿಸಿ ಕೆಳದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡನೆಂದೂ ಹೇಳಲಾಗಿದೆ. ಸಾಮಾನ್ಯವಾಗಿ ಎಲ್ಲ ರಾಜಮನೆತನಗಳು ಮತ್ತು ನಾಯಕ ಮನೆತನಗಳಿಗೆ ಸಂಬಂಧಿಸಿದಂತೆ ಇಂಥ ಕತೆಗಳು ಇರುತ್ತವೆ.

ಚೌಡಪ್ಪಗೌಡನೂ ಅವನು ಸಹೋದರನೂ ಕಷ್ಟಸಹಿಷ್ಣುಗಳಾಗಿ ಶ್ರದ್ಧೆಯಿಂದ ದುಡಿದು ಶ್ರೀಮಂತರಾದರು. ಧರ್ಮನಿಷ್ಠರಾದ ಅವರಲ್ಲು ಸುತ್ತಣ ಜನರಿಗೆ ಅಭಿಮಾನ ಬೆಳೆಯಿತು. ಚೌಡಪ್ಪಗೌಡ ಗ್ರಾಮದ ಮುಖಂಡನಾಗಿ ಜನರ ನೆಮ್ಮದಿಗೆ ಕಾರಣನಾದ. ಅವನು ಕಳ್ಳಕಾರರ ಕಿರುಕುಳವನ್ನು ಅಡಗಿಸಿದ. ಅವನ ಹೆಸರು ವಿಜಯನಗರದ ಸಾಮ್ರಾಟನ ಕಿವಿಯನ್ನೂ ಮುಟ್ಟಿತು. ಚೌಡಪ್ಪನ ಕೀರ್ತಿಯನ್ನು ಸಹಿಸದ ಅನೇಕ ಅಸೂಯಾಪರರು ವಿಜಯನಗರದ ಅರಸನಿಗೆ ದೂರು ಹೇಳಿದರು. ಸಾಮ್ರಾಟನ ನಿರೂಪದ ಮೇರೆಗೆ ಚೌಡಪ್ಪಗೌಡ ವಿಜಯನಗರಕ್ಕೆ ಹೋದ. ವಿಜಯನಗರದ ಸೈನ್ಯವೇ ಕೆಳದಿಗೆ ಬಂದು ಚೌಡಪ್ಪನನ್ನು ಸೆರೆಹಿಡಿದು ವಿಜಯನಗರಕ್ಕೆ ಕರೆದುಕೊಂಡು ಹೋಯಿತೆಂದೂ ಹೇಳಲಾಗಿದೆ. ಅಂತೂ ಚೌಡಪ್ಪಗೌಡ ತನ್ನ ಸೋದರ ಭದ್ರಪ್ಪನೊಂದಿಗೆ ವಿಜಯನಗರಕ್ಕೆ ಹೋದ. ಈ ಸಹೋದರರ ನಿಷ್ಕಪಟ ಮತ್ತು ನಿಃಸ್ಪøಹತೆಯ ಮನೋಭಾವವನ್ನು ಮೆಚ್ಚಿ ಅರಸ ಅವರಿಗೆ ಛತ್ರಚಾಮರಗಳನ್ನು ನೀಡಿ ಗೌರವಿಸಿದ. ಹಾಗೂ ಆ ಸಮಯದಲ್ಲಿ ಬಂಡೆದ್ದಿದ್ದ ಬಲಿಹಾಳು ಪ್ರಾಂತ್ಯದ ಮುಖಂಡರನ್ನು ಶಿಕ್ಷಿಸಲು ಈ ಸಹೋದರರು ನಿಯೋಜಿತರಾಗಿ, ಯಶಸ್ವಿಯಾಗಿ ಆ ಕಾರ್ಯವನ್ನು ನಿರ್ವಹಿಸಿದರೆಂದು ತಿಳಿದುಬರುತ್ತದೆ. ವಿಜಯನಗರದ ಅರಸ ಚೌಡಗೌಡನಿಗೆ ಕೆಳದಿ, ಇಕ್ಕೇರಿ, ಚಂದ್ರಗುತ್ತಿ, ಪೆರ್ಬೆಯಲು, ಎಲಗಳಲೆ, ಮೋದೂರು, ಕಲಿಸೆ ಮತ್ತು ಲಾತವಾಡಿ ಎಂಬ ಎಂಟು ಗ್ರಾಮಗಳನ್ನು ಕೊಟ್ಟುದಲ್ಲದೆ ಚೌಡಪ್ಪನಾಯಕನೆಂದು ವಿಜಯನಗರದ ಸಾಮಂತರಾಗಿ ರಾಜ್ಯವಾಳುವಂತೆ ನಿಯಮಿಸಿದನೆಂದು ತಿಳಿದುಬರುತ್ತದೆ.

	ಚೌಡಪ್ಪನಾಯಕ ಇಕ್ಕೇರಿಯಲ್ಲಿ ಒಂದು ಅರಮನೆಯನ್ನೂ ಕೋಟೆಯನ್ನೂ ಕಟ್ಟಿಸಿ ತನ್ನ ರಾಜಧಾನಿಯಾಗಿ ಮಾಡಿಕೊಂಡ. ಚೌಡಪ್ಪನಾಯಕನಿಗೆ ಸದಾಶಿವ ಮತ್ತು ಭದ್ರಪ್ಪ ಎಂಬ ಇಬ್ಬರು ಗಂಡುಮಕ್ಕಳಿದ್ದರು. ಚೌಡಪ್ಪಗೌಡ ಕ್ರಿ.ಶ. 1514ರಲ್ಲಿ ಮರಣಹೊಂದಿದ. ಅನಂತರ ಅವನ ಹಿರಿಯ ಮಗನಾದ ಸದಾಶಿವ ನಾಯಕ ಕೆಳದಿಯ ನಾಯಕನಾದ.
(ಜಿ.ಆರ್.ಆರ್.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ